Saturday, May 11, 2013

ಹೊಸ ನಾಳೆಗೆ..

ಹೊಸ ನಾಳೆಗೆ, ನೀ ಕೊಟ್ಟ
ಮುತ್ತುಗಳ ರಂಗೋಲಿ ಇಟ್ಟಿದ್ದೇನೆ
ನೀ ಭಿತ್ತಿದ ಭಾವಗಳ ರಂಗು ತುಂಬಿದ್ದೇನೆ
ನಿನ್ನದೇ ಸವಿನೆನಪ ತೋರಣ ಕಟ್ಟಿದ್ದೇನೆ
ನಿನ್ನ ವಿರಹವನೆ ದೀಪ ಮಾಡಿ
ಆರತಿ ಹಚ್ಚಿದ್ದೇನೆ..

ಹೊಸ ನಾಳೆಗೆ, ನನ್ನದೆನ್ನುವುದೆಲ್ಲವ
ಬೇವು ಬೆಲ್ಲವ ನಿನಗೇ ಕೊಟ್ಟಿದ್ದೇನೆ
ನನ್ನೆಲ್ಲ ನಲಿವುಗಳ ನಿನ್ನೊಂದು
ನಗುವಿಗೇ ಒತ್ತೆಯಿಟ್ಟಿದ್ದೇನೆ
ಬೇರಾದ ದಾರಿಗಳ ಹೊರತಾಗಿಯೂ
ಭಾವತೀರದಿ ನಿನ್ನ ಜೊತೆ ಹೆಜ್ಜೆಯಿಟ್ಟಿದ್ದೇನೆ..

ನಾಳೆಯ ಹೊಗಳಿಗೆ ನೀ
ಗಂಧವಾಗಲೆಂದು
ನನ್ನೆಲ್ಲ ಸ್ವಾರ್ಥಿ ಕನಸುಗಳ
ನನ್ನೊಳಗೇ ಬಂಧಿಸಿಟ್ಟಿದ್ದೇನೆ
ಹುಟ್ಟುವ ಹೊಸ ರವಿಗೆ ನಿನ್ನೊಲವ
ಬೆಳಕಿರಲಿ ಎಂದು ಹಾರೈಸಿ
ಜನುಮಗಳ ಹರಕೆ ಕಟ್ಟಿದ್ದೇನೆ..

ಹೊಸ ನಾಳೆಗೆ,
ನನ್ನೆಲ್ಲ ನೋವು ನಲಿವುಗಳ
ಜೀವ-ಸಾವುಗಳ, ಭಾವ-ಬದುಕುಗಳ
ನಾವೆಯಲಿ
ನಿನ್ನೊಲವ ನೀರ ಮೇಲೆ
ನಿನ್ನನ್ನೇ ತೇಲಿ ಬಿಟ್ಟಿದ್ದೇನೆ...

ಅಂಟಿಕೊಳ್ಳದ ಚಿತ್ರಗಳು...

ಅಂಬರದಿಂದ ಕಿರಣಗಳ ಧಾರೆ
ಚೆಲ್ಲುತಿರುವನು ಅರುಣ ಧರೆಗೆ..
ಸಂಜೆಯಾಗಲು ರವಿಯು ಶರಧಿಯೊಡಲಲಿ
ಸೇರಿ ಮಾಯವಾಗುವನು ಅವಳ ಸೆರೆಗೆ..
ಚಂದ್ರ ಚುಕ್ಕಿಗಳದೇ ತುಂತುರು ಆಗಸದಲಿ
ಮತ್ತೆ ಬೆಳಗಾಗುವವರೆಗೆ...
ಜಗದ ತುಂಬಾ ಅಂಟಿಕೊಳ್ಳದ ಚಿತ್ರಗಳೇ...

ಜನ್ಮವೆತ್ತಿದ ಕ್ಷಣದಿ ಮರುಜನ್ಮ ಆಮ್ಮನಿಗೆ
ಅವಳ ನಯನ ದೀವಿಗೆಯಲ್ಲಿ
ಬಾಲ್ಯ ಹೇಗೆ ಕಳೆಯಿತೋ
ಹುಡುಕಿದರೂ ಸಿಗುವುದಿಲ್ಲ ಕಾರಣ..
ಆವರಿಸಿತು ಯೌವನದ ಹೊಸ ಚಿಗುರು ಮುಖದಲ್ಲಿ
ಶಾಶ್ವತವಲ್ಲ ಯಾವುದೊ ಇಲ್ಲಿ..
ಹುಟ್ಟು ಸಾವುಗಳೆರಡು ಗೆಳೆಯರು
ಎಲ್ಲರಲ್ಲಿಯು ಇದ್ದೇ ಇರುವರು..
ಜಗದ ತುಂಬಾ ಅಂಟಿಕೊಳ್ಳದ ಚಿತ್ರಗಳೇ...

ಮಲೆನಾಡಿನ ಸಿರಿ ಸೊಬಗು ಹಸಿರುಟ್ಟ ಇಳೆ
ಮೈ ತುಂಬಿಕೊಂಡಿದೆ ಮುಂಗಾರು ಮಳೆಗೆ
ಹಿಮಬಿಂದು ಮಾಲೆಗಳು ಕರಗಿ ಹರಿದಿವೆ..
ಮುಗಿದೊಡನೆ ಶಿಶಿರದ ಸಂಭ್ರಮ
ವಸಂತಕ್ಕೆ ಕಾದಿರುವ ಮಾಮರ..
ಮತ್ತೆ ಬೇಸಿಗೆಯ ಸುಡುಬೇಗೆ
ನೀರಿಗಾಗಿ ಹಾಹಾಕಾರ..
ಸ್ವಲ್ಪ ದಿನಗಳಲ್ಲಿಯೇ ಮಳೆಗಾಲ ಪ್ರವಾಹ
ಜಗದ ತುಂಬಾ ಅಂಟಿಕೊಳ್ಳದ ಚಿತ್ರಗಳೇ...

ಅರಿವಿರದ ನಾಳೆಗಳ ಕನಸು ಹೆಣೆವೆವು ಇಂದು
ಯೋಚಿಸುವೆವು ಲೋಚನಕ್ಕೊ ಮುಂದು
ನೋಡಲು ಬಯಸುವೆವು ಅನಂತದವರೆಗೆ..
ದಿಕ್ಕು ಕಾಣದ ಜಗದ ಚಿತ್ರಗಳ ಅಂಟಿಸುವ ತವಕ ನಮಗೆ..
ಜಗತ್ತು ಬದಲಾಗದು..
ಜಗದ ತುಂಬಾ ಅಂಟಿಕೊಳ್ಳದ ಚಿತ್ರಗಳೇ...


Saturday, April 13, 2013

ನೀನಿರಬೇಕಿತ್ತು...

oದು ಮನೆಯ ಕಿಟಕಿಯ ಪಕ್ಕ
ಒಬ್ಬಳೇ ಕುಳಿತು ಕನಸು ಹೆಣೆಯುವಾಗ
ಜೊತೆಗೆ ನೀನಿರಬೇಕಿತ್ತು...

ಅoದು ಮನಸೇಕೋ ಭಾರ, ನಿನ್ನ
ನೆನಪುಗಳು ಕಣ್ಣಲ್ಲಿ  ನೀರಾಗಿ ಹರಿಯುವಾಗ
oತೈಸಲು ನೀನಿರಬೇಕಿತ್ತು...

ಶ್ರಾವಣದ ಸೊನೆ ಮಳೆ ಎಡಬಿಡದೇ ಸುರಿದಿರಲು
ಬಾಯಾರಿದ ಭುವಿಗಾದ oತಸ

ನೋಡಲು ನೀನಿರಬೇಕಿತ್ತು...

ಹೀಗೊoದು ಸoಜೆ...

ಮೆದುವಾಗಿ ಹಿತವಾಗಿ
ಬೀಸಿ ಬಂದ ಗಾಳಿ
ತಂದು ಸವರಿದ್ದು
ಅವನ ನೆನಪು....

ಕಡಲ ದಡದಲ್ಲಿ
ಉಕ್ಕುವ ತೆರೆ, ಚೆಲ್ಲಿದ ನೊರೆ
ಅಲೆದಾಡಿದ ಭಾವನೆಗಳ ನಡುವೆ
ಬೀಸಿದ ಚಳಿಗಾಳಿ...

ದೂರ ತೀರದಲ್ಲೆಲ್ಲೊ ಮರೆಯಾದ ಸೂರ್ಯ
ಮನದಲಿ ಮನೆ ಮಾಡಿರುವ
ನಿನ್ನ ಮರೆಸಲಿಲ್ಲ...
ಮತ್ತೆ ಮತ್ತೆ ನೆನಪಿಸಿದ....

ಬೊಗಸೆ ಪ್ರೀತಿಯನರಸಿ......

ಹುಟ್ಟಿದ ಮರುಕ್ಷಣ ಅಮ್ಮಾ oದೆ..
ಆಮ್ಮನ ಮಡಿಲಲಿ ಪ್ರೀತಿಯ oಡೆ..
ಅಪ್ಪನ ಕನಸಿನ ಕಣ್ಮಣಿಯಾದೆ..
ಮನೆ ಮನದ ಮಲ್ಲಿಗೆಯಾದೆ...
oಗಳದ oಗೋಲಿ ಅಳಿಸಿದ ನೆನಪು ಇನ್ನೂ ಕಣ್ಣೊಳಗಿದೆ ..

ಮನಸಿನಲಿ ಮಾಸದ ಅಪೂರ್ವ ಪ್ರೀತಿಗೆ 
ಅಕ್ಷರ ರೂಪ ಕೊಟ್ಟು ಬಣ್ಣ ಬಳಿದಿರುವೆ...

ಇಲ್ಲವಾದರೆ..
ಹಾಗೆ ಉಳಿದು ಬಿಡುತ್ತದೆ
ನನ್ನ ಪ್ರೀತಿ ನನ್ನೊಳಗೆ ಅಲೆದು...

ಇನ್ನೂ ಮುಗಿದಿಲ್ಲ ನನ್ನ ಪಯಣ..
ಸಾಗುತ್ತಲೇ ಇದೆ ..
ಬೊಗಸೆ ಪ್ರೀತಿಯನರಸಿ......