Saturday, May 11, 2013

ಅಂಟಿಕೊಳ್ಳದ ಚಿತ್ರಗಳು...

ಅಂಬರದಿಂದ ಕಿರಣಗಳ ಧಾರೆ
ಚೆಲ್ಲುತಿರುವನು ಅರುಣ ಧರೆಗೆ..
ಸಂಜೆಯಾಗಲು ರವಿಯು ಶರಧಿಯೊಡಲಲಿ
ಸೇರಿ ಮಾಯವಾಗುವನು ಅವಳ ಸೆರೆಗೆ..
ಚಂದ್ರ ಚುಕ್ಕಿಗಳದೇ ತುಂತುರು ಆಗಸದಲಿ
ಮತ್ತೆ ಬೆಳಗಾಗುವವರೆಗೆ...
ಜಗದ ತುಂಬಾ ಅಂಟಿಕೊಳ್ಳದ ಚಿತ್ರಗಳೇ...

ಜನ್ಮವೆತ್ತಿದ ಕ್ಷಣದಿ ಮರುಜನ್ಮ ಆಮ್ಮನಿಗೆ
ಅವಳ ನಯನ ದೀವಿಗೆಯಲ್ಲಿ
ಬಾಲ್ಯ ಹೇಗೆ ಕಳೆಯಿತೋ
ಹುಡುಕಿದರೂ ಸಿಗುವುದಿಲ್ಲ ಕಾರಣ..
ಆವರಿಸಿತು ಯೌವನದ ಹೊಸ ಚಿಗುರು ಮುಖದಲ್ಲಿ
ಶಾಶ್ವತವಲ್ಲ ಯಾವುದೊ ಇಲ್ಲಿ..
ಹುಟ್ಟು ಸಾವುಗಳೆರಡು ಗೆಳೆಯರು
ಎಲ್ಲರಲ್ಲಿಯು ಇದ್ದೇ ಇರುವರು..
ಜಗದ ತುಂಬಾ ಅಂಟಿಕೊಳ್ಳದ ಚಿತ್ರಗಳೇ...

ಮಲೆನಾಡಿನ ಸಿರಿ ಸೊಬಗು ಹಸಿರುಟ್ಟ ಇಳೆ
ಮೈ ತುಂಬಿಕೊಂಡಿದೆ ಮುಂಗಾರು ಮಳೆಗೆ
ಹಿಮಬಿಂದು ಮಾಲೆಗಳು ಕರಗಿ ಹರಿದಿವೆ..
ಮುಗಿದೊಡನೆ ಶಿಶಿರದ ಸಂಭ್ರಮ
ವಸಂತಕ್ಕೆ ಕಾದಿರುವ ಮಾಮರ..
ಮತ್ತೆ ಬೇಸಿಗೆಯ ಸುಡುಬೇಗೆ
ನೀರಿಗಾಗಿ ಹಾಹಾಕಾರ..
ಸ್ವಲ್ಪ ದಿನಗಳಲ್ಲಿಯೇ ಮಳೆಗಾಲ ಪ್ರವಾಹ
ಜಗದ ತುಂಬಾ ಅಂಟಿಕೊಳ್ಳದ ಚಿತ್ರಗಳೇ...

ಅರಿವಿರದ ನಾಳೆಗಳ ಕನಸು ಹೆಣೆವೆವು ಇಂದು
ಯೋಚಿಸುವೆವು ಲೋಚನಕ್ಕೊ ಮುಂದು
ನೋಡಲು ಬಯಸುವೆವು ಅನಂತದವರೆಗೆ..
ದಿಕ್ಕು ಕಾಣದ ಜಗದ ಚಿತ್ರಗಳ ಅಂಟಿಸುವ ತವಕ ನಮಗೆ..
ಜಗತ್ತು ಬದಲಾಗದು..
ಜಗದ ತುಂಬಾ ಅಂಟಿಕೊಳ್ಳದ ಚಿತ್ರಗಳೇ...


2 comments:

  1. ಜಗದ ತುಂಬಾ ಅಂಟಿಕೊಳ್ಳದ ಚಿತ್ರಗಳೇ...
    ಇಷ್ಟವಾಯಿತು...

    ReplyDelete